ಟೋಜೋ, ಹಿಡೆಕಿ
1884-1948. ಎರಡನೆಯ ಮಹಾಯುದ್ಧದ ಕಾಲದಲ್ಲಿ. 1941-1944ರಲ್ಲಿ. ಜಪಾನಿನ ಪ್ರಧಾನಿಯಾಗಿದ್ದವ. 1884ರ ಡಿಸೆಂಬರ್ 30ರಂದು ಟೋಕಿಯೋದಲ್ಲಿ ಜನಿಸಿದ. ತಂದೆ ಲೆಫ್ಟನೆಂಟ್-ಜನರಲ್ ಟೋಜೋಏಕಿಯೋ. ಇಂಪೀರಿಯಲ್ ಮಿಲಿಟರಿ ಅಕಾಡೆಮಿ ಮತ್ತು ಮಿಲಿಟರಿ ಸ್ಟಾಫ್ ಕಾಲೇಜಿನಲ್ಲಿ ಮಿಲಿಟರಿ ಶಿಕ್ಷಣವನ್ನು ಪಡೆದಮೇಲೆ 1919ರಲ್ಲಿ ಜರ್ಮನಿಯಲ್ಲಿ ಜಪಾನೀ ದೂತಾವಾಸದಲ್ಲಿ ಸೈನಿಕ ಸಹಚಾರಿಯಾಗಿ (ಮಿಲಿಟರಿ ಅಟಾಷೇ) ನೇಮಕ ಹೊಂದಿದ. ಹಿಡಕಿ ಟೋಜೋ ಸಮರ್ಥ ಆಡಳಿತಗಾರನೆಂದೂ ಚತುರ ದಂಡನಾಯಕನೆಂದೂ ಶಿಸ್ತುಪಾಲಕನೆಂದೂ ಕ್ಷೇತ್ರ ಕಾರ್ಯಚರಣೆಯಲ್ಲಿ ಚತುರ ನಾಯಕನೆಂದೂ ಪ್ರಸಿದ್ಧಿ ಪಡೆದ. ಕ್ರಮ ಕ್ರಮವಾಗಿ ಮೇಲೇರುತ್ತಹೋದ ಈತ 1937ರಲ್ಲಿ ಮಂಚೂರಿಯಲ್ಲಿದ್ದ ಪ್ರಬಲವಾದ ಕ್ವಾನ್‍ಟುಂಗ್ ಸೇನೆಯ ದಂಡನಾಯಕನಾದ. ರಾಜಕುಮಾರ ಕೊನೊಯೆಯ ಪ್ರಥಮ ಸಂಪುಟದಲ್ಲಿ ಉಪ-ಯುದ್ಧಮಂತ್ರಿಯಾಗಿ ಇವನ ನೇಮಕವಾಯಿತು (1938-39). ಭೂಸೇನೆ ಹಾಗೂ ವಾಯುಸೇನೆಯಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಇವನಿಗೆ ಕೊನೊಯೆಯ ಎರಡನೆಯ ಮತ್ತು ಮೂರನೆಯ ಸರ್ಕಾರಗಳಲ್ಲಿ ಯುದ್ಧಮಂತ್ರಿಯ ಸ್ಥಾನ ದೊರಕಿತು (1940-41). 1941 ರ ಅಕ್ಟೋಬರ್ 16ರಂದು ಇವನು ಜಪಾನಿನ ಪ್ರಧಾನಿ ಹಾಗೂ ಯುದ್ಧ ಮಂತ್ರಿಯಾದ.

ಏಷ್ಯ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿ ಜಪಾನಿನ ಬಲವನ್ನು ಸಂಘಟಿಸಿ ವಿಸ್ತರಿಸಲು ಟೋಜೊ ಸಂಕಲ್ಪ ಮಾಡಿದ. 1941ರ ಡಿಸೆಂಬರ್ 7 ರಂದು ಪರ್ಲ್ ಹಾರ್ಬರಿನಲ್ಲಿ ಅಮೆರಿಕದ ನೌಕಾನೆಲೆಯ ಮೇಲೆ ಜಪಾನು ದಾಳಿ ಮಾಡಿತು. ಜಪಾನಿನ ಯುದ್ಧಕಾಲದ ನಾಯಕನಾಗಿ ಇವನು ಏಷ್ಯದಲ್ಲಿ ಹೊಸ ವ್ಯವಸ್ಥೆಯೊಂದನ್ನು ಸ್ಥಾಪಿಸಲು ಉದ್ಯುಕ್ತನಾದ. ಇವನ ನಿರ್ದೇಶನದಲ್ಲಿ ಜಪಾನು ಆಗ್ನೇಯ ಏಷ್ಯ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿ ಮೊದಮೊದಲು ಭಾರಿ ವಿಜಯ ಸಾಧಿಸಿತು. ಆದರೆ ಮಿತ್ರರಾಷ್ಟ್ರಗಳು ಪ್ರತ್ಯಾಕ್ರಮಣ ಕಾರ್ಯಾಚರಣೆಯಲ್ಲಿ ತೊಡಗಿದಾಗ ಅದರ ಎದುರಿನಲ್ಲಿ ಜಪಾನು ತಾನು ಮೊದಲು ಗೆದ್ದಿದ್ದ ಪ್ರದೇಶಗಳನ್ನು ದಕ್ಕಿಸಿಕೊಳ್ಳಲಾರದೆ ಹೋಯಿತು. 1944ರಲ್ಲಿ ಮರೀಯಾನ ದ್ವೀಪಗಳನ್ನು ಅದು ಕಳೆದುಕೊಂಡಾಗಲಂತೂ ಟೋಜೋ ವಿರುದ್ಧ ಟೀಕೆ ತುಂಬ ಬಿರುಸಾಯಿತು. ಈ ಸೋಲುಗಳಿಗೆ ಇವನೇ ಕಾರಣವೇನೆಂದು ಆಪಾದಿಸಲಾಯಿತು. ಇವನು ರಾಜೀನಾಮೆ ಕೊಟ್ಟ. 1945ರಲ್ಲಿ ಜಪಾನು ಶರಣಾಗತವಾಯಿತು. ಯುದ್ಧಾಪರಾಧಕ್ಕಾಗಿ ಟೋಜೋ ಬಂಧನಕ್ಕೆ ಒಳಗಾದ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲನಾದ. ಅಂತರರಾಷ್ಟ್ರೀಯ ಸೈನಿಕ ಮಂಡಳಿ ವಿಚಾರಣೆ ನಡೆಸಿ ಇವನು ಅಪರಾಧಿಯೆಂದು ತೀರ್ಪು ನೀಡಿತು. 1948ರ ಡಿಸೆಂಬರ್ 23ರಂದು ಇವನನ್ನು ನೇಣುಹಾಕಲಾಯಿತು.							(ಕೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ